Tuesday 8 November 2011

ಗೋಲ್ಡನ್ ಸ್ಟಾರ್ ಗಣೇಶನ 'ಮದುವೆ ಮನೆ' ವಿಮರ್ಶೆ

My Great Web page
ಗೋಲ್ಡನ್ ಸ್ಟಾರ್ ಗಣೇಶ್ ಬಹುನಿರೀಕ್ಷೆಯ 'ಮದುವೆ ಮನೆ' ಚಿತ್ರ ಗಣೇಶೋತ್ಸವವಾಗಿದೆ. ಮತ್ತೊಂದು 'ಮುಂಗಾರು ಮಳೆ' ಗಾಗಿ ಕಾದಿದ್ದ ನಟ ಗಣೇಶ್, ಅವರ ಅಭಿಮಾನಿಗಳು ಹಾಗೂ ಚಿತ್ರರಂಗಕ್ಕೆ ಸಿಕ್ಕಿದ್ದು ಮದುವೆಯೂಟದ ಬದಲು ಗಣೇಶನ ಹಬ್ಬ. ಧಾರಾವಾಹಿ ನಿರ್ದೇಶನದ ಅನುಭವಿ ಸುನಿಲ್ ಕುಮಾರ್ ಸಿಂಗ್ 'ಮದುವೆ ಮನೆ' ಊಟವನ್ನು 'ಮಾಮೂಲಿ ಊಟ'ವನ್ನಾಗಿ ಮಾಡುವಲ್ಲಿ ಅಥವಾ 'ಗಣೇಶನ ಹಬ್ಬ' ಮಾಡುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ

ಇತ್ತೀಚಿನ ಕನ್ನಡ ಸಿನಿಮಾಗಳಲ್ಲಿ ಕಥೆ ಮಾಯವಾಗಿ ಕೇವಲ ಚಿತ್ರಕಥೆಯಿಂದ ಸಿನಿಮಾ ಆಗುತ್ತಿದೆ. ಅದು ಮದುವೆ ಮನೆಯಲ್ಲಿಯೂ ಮುಂದುವರಿದಿದೆ. ಚಿತ್ರಕಥೆಯನ್ನು ಸಾಕಷ್ಟು ಚೆನ್ನಾಗಿಯೇ ಮಾಡಿಕೊಂಡಿರುವ ನಿರ್ದೇಶಕರು, ಮಧ್ಯಂತರದವರೆಗೆ ಪ್ರೇಕ್ಷಕರಿಗೆ ಮನರಂಜನೆ ನೀಡುವುದರ ಜೊತೆಗೆ ನಿರೂಪಣೆಯಲ್ಲಿ ಗಟ್ಟಿತನ ಕಾಯ್ದುಕೊಂಡಿದ್ದಾರೆ. ಆದರೆ ಮಧ್ಯಂತರದ ನಂತರ ಒಂದೊಂದಾಗಿ ಬಂದೆರಗುವ ಅನಿರೀಕ್ಷಿತ ತಿರುವು ಹಾಗೂ ಫ್ಲಾಶ್ ಬ್ಯಾಕ್ ಗಳು ಪ್ರೇಕ್ಷಕರಿಗೆ ಕಿರಿಕಿರಿ ಉಂಟುಮಾಡುವುದರ ಜೊತೆಗೆ ನಿರೂಪಣೆಯಲ್ಲಿ ಗೊಂದಲ ಎದ್ದು ಕಾಣುವಂತಿದೆ.

ಚಿಕ್ಕ ಊರೊಂದನ್ನು ಪ್ರಪಂಚದ ನಕ್ಷೆಯಲ್ಲಿ ಗುರುತಿಸುವಂತೆ ಮಾಡಿದ ತಂಗಿ, ತನ್ನ ಒಳ್ಳೆಯ ಕೆಲಸಕ್ಕೆ ಪ್ರಶಸ್ತಿ ತೆಗೆದುಕೊಳ್ಳಲು ವಿದೇಶಕ್ಕೆ ಹೊರಟಿರುವಾಗ ಎಸಿಪಿ ದುಶ್ಯಂತನ ಗುಂಡಿಗೆ ಬಲಿಯಾಗುತ್ತಾಳೆ. ಅಣ್ಣ-ತಂಗಿಯ ಬಾಂಧವ್ಯದ ನಿರೂಪಣೆ ಚೆನ್ನಾಗಿದೆ. ಆತ ಪ್ರಸಿದ್ಧಿಯ ಹುಚ್ಚಿಗೆ ಬಿದ್ದು ಎನ್ ಕೌಂಟರ್ ಹೆಸರಿನಲ್ಲಿ ಅಮಾಯಕರನ್ನು ಕೊಲೆಮಾಡುತ್ತಿರುತ್ತಾನೆ. ಅದನ್ನು ಬಯಲಿಗೆಳೆಯುವ ಸಾಹಸ ಮಾಡಿದ ಪತ್ರಕರ್ತನೊಬ್ಬನನ್ನು ಸಾಯಿಸಿ ಪಾಪದ ಕೊಡವನ್ನು ತುಂಬಿಸಿಕೊಂಡಿರುತ್ತಾನೆ. ಅದೆಲ್ಲವನ್ನೂ ನಾಯಕ ತಿಳಿದುಕೊಂಡಿರುತ್ತಾನೆ.

ಅದೇ ವೇಳೆ ನಾಯಕನಿಗೆ, ದುಶ್ಯಂತ್ ಮದುವೆ ಆಗುತ್ತಿರುವ ವಿಷಯ ತಿಳಿದು ಬರುತ್ತದೆ. ಹೇಗಾದರೂ ಮಾಡಿ ಆ ಹುಡುಗಿಯನ್ನು ಕಾಪಾಡಿ ಎಸಿಪಿ ದುಶ್ಯಂತನನ್ನು ಮುಗಿಸಲು ಸಂಚು ಹೂಡುತ್ತಾನೆ. ಅದಕ್ಕಾಗಿ ಹೊರಟ ನಾಯಕ ಹೇಗೆ ಮದುವೆ ಮನೆಗೆ ಹೊರಟಿದ್ದ ಹುಡುಗಿ ಹಾಗೂ ಕುಟುಂಬವನ್ನು ಸೇರಿಕೊಳ್ಳುತ್ತಾನೆ. ಮುಂದೆ ಮದುವೆ ಮನೆ ಹೇಗೆ 'ನಾಟಕದ ವೇದಿಕೆ'ಯಾಗಿ ಬದಲಾಗುತ್ತದೆ. ಅಲ್ಲಿಂದ ಮುಂದಕ್ಕೆ ನಾಯಕ-ನಾಯಕಿ ಕಥೆ ಏನಾಗುತ್ತದೆ ಎಂಬುದನ್ನು ತೆರೆಯಮೇಲೆ ನೋಡಿ.

ನಿರ್ದೇಶಕ ಸುನೀಲ್ ಕುಮಾರ್ ಸಿಂಗ್ ಇನ್ನೂ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಮಧ್ಯಂತರದಲ್ಲಿಯೇ ಮದುವೆಯೂಟ ಖಾಲಿಯಾಗಿ ಆಮೇಲೆ ಕೈಗೆ ಸಿಕ್ಕಿದ್ದನ್ನು ಬಡಿಸಿದಂತಿದೆ ಸಿನಿಮಾ. ತಿರುವುಗಳನ್ನು ಹಾಗೂ ಫ್ಲಾಶ್ ಬ್ಯಾಕ್ ಗಳನ್ನು ಕೊನೆಯಲ್ಲಿಯೂ ಸರಿಯಾಗಿ ನಿರೂಪಿಸದಿದ್ದರೆ ಹೇಗೆ? ಅರ್ಜೆಂಟ್ ಅಡಿಗೆ ಮಾಡಿ ಮದುವೆ ಮನೆಯಲ್ಲಿ ಬಡಿಸಿದಂತಿದೆ. ಆದರೂ ಮೆಚ್ಚತಕ್ಕ ಅಂಶವೆಂದರೆ ಗೋಲ್ಡನ್ ಸ್ಟಾರ್ ಗಣೇಶ್ ಪ್ರತಿಭೆಯನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ.

ನಟನೆಯ ವಿಷಯದಲ್ಲಿ ಗಣೇಶ್ ಅಪ್ಪಟ ಗೋಲ್ಡ್. ಮದುವೆ ಮನೆ ಅನ್ನುವುದಕ್ಕಿಂತ ಗಣೇಶೋತ್ಸವ ಅನ್ನುವುದೇ ಸರಿ. ಪ್ರತಿಯೊಂದು ದೃಶ್ಯದಲ್ಲೂ ಮನಮುಟ್ಟುವ ಅಭಿನಯದ ಜೊತೆಗೆ ಸಂಭಾಷಣೆಗೆ ಸರಿಯಾದ ಬಾಡಿ ಲಾಂಗ್ವೇಜ್ ಗಮನಾರ್ಹವಾಗಿದೆ. ಸೋಲಿನಿಂದ ಹೊರಬರಲೇಬೇಕೆಂಬ ಅವರ ಶ್ರದ್ಧೆ ಪಾತ್ರಪೋಷಣೆಯಲ್ಲಿ ಎದ್ದು ಕಾಣುತ್ತದೆ. ಆದರೆ ನಾಯಕಿ ಶ್ರದ್ಧಾ ಮಾತ್ರ ಚೆಂದವೂ ಇಲ್ಲದ ಗೊಂಬೆ. ಕನಿಷ್ಟ ಕೋಪವನ್ನೂ ನಟಿಸಲಾಗದ ನಾಯಕಿಯಾಗಿ ಚಿತ್ರಕ್ಕೆ ಕಾಣಿಕೆ ನೀಡುವಲ್ಲಿ ವಿಫಲವಾಗಿದ್ದಾರೆ.

ಉಳಿದಂತೆ ಪೋಷಕವರ್ಗದಲ್ಲಿ ಎಲ್ಲರದೂ ಪಾತ್ರಕ್ಕೆ ಸರಿಯಾದ ಪೋಷಣೆ. ಶರಣ್ ಹಾಸ್ಯ, ಅಭಿನಯ ಸಿನಿಮಾಗೆ ಪ್ಲಸ್ ಪಾಯಿಂಟ್. ಈಗ ಚಿರಂತ್ ಆಗಿರುವ ದುಶ್ಯಂತ್ ಪಾತ್ರಧಾರಿ ಜುಗಾರಿ ಅವಿನಾಶ್, ಅಭಿನಯದಲ್ಲಿ ಇನ್ನೂ ಪಳಗಬೇಕು. ಉಳಿದಂತೆ ಸಂಗೀತ, ಸಾಹಿತ್ಯ ನಾರ್ಮಲ್. ಕ್ಯಾಮೆರಾ ಕೆಲಸ, ಸಂಕಲನ ಓಕೆ. ಒಳ್ಳೆಯ ಕಥೆ, ಚಿತ್ರಕಥೆ ಮಾಡಿಕೊಂಡು, ನಿರೂಪಣೆಯಲ್ಲಿ ಮಧ್ಯಂತರದ ನಂತರ ಗೊಂದಲ ಆಗಿರದಿದ್ದರೆ ಮದುವೆ ಮನೆ ಇನ್ನೊಂದು ಮುಂಗಾರು ಮಳೆ ಆಗಬಹುದಿತ್ತು. ಆದರೂ ಗಣೇಶ್ ಅಭಿಮಾನಿಗಳಿಗೆ ಮದುವೆ ಮನೆ ಊಟ ಭರ್ಜರಿಯಾಗಿದೆ. ಎಲ್ಲರೂ ಒಮ್ಮೆ ಗಣೇಶೋತ್ಸವ ನೋಡುವಂತಿದೆ.

ಚಿತ್ರ: ಮದುವೆ ಮನೆ
ನಿರ್ಮಾಪಕರು: ರುಹೀನ ರೆಹಮಾನ್
ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ: ಸುನಿಲ್ ಕುಮಾರ್ ಸಿಂಗ್
ತಾರಾಗಣ: ಗಣೇಶ್, ಶ್ರದ್ಧಾ ಆರ್ಯ, ಚಿರಂತ್ (ಜುಗಾರಿ ಅವಿನಾಶ್), ಶರಣ್, ತಬಲಾ ನಾಣಿ, ಅರವಿಂದ್, ಹನುಮಂತೇಗೌಡ, ಕೆ.ವಿ. ನಾಗೇಶ್ ಕುಮಾರ್ ಮುಂತಾದವರು
ಸಂಗೀತ: ಮಣಿಕಾಂತ್ ಕದ್ರಿ
ಛಾಯಾಗ್ರಹಣ: ಶೇಖರ್ ಚಂದ್ರ
ಸಂಕಲನ: ಪಿ. ಆರ್. ಸೌಂದರ್ ರಾಜ್

No comments:

Post a Comment